ಬುದ್ಧಿಶಕ್ತಿಯ ಸಾಮಥ್ರ್ಯಾಂಕ
ವ್ಯಕ್ತಿಯ ಬುದ್ಧಿಶಕ್ತಿಯನ್ನು ವಯೋಮಾನದಲ್ಲಿ ಪರಮಾಣಾತ್ಮಕವಾಗಿ ನಿರ್ಧರಿಸಲು ರೂಪುಗೊಂಡಿರುವ ಅಳತೆಯ ಒಂದು ಸಾಧನ (ಇಂಟೆಲಿಜೆನ್ಸ್ ಕೋಷೆಂಟ್). ಇದನ್ನು ಸಂಖ್ಯಾರೂಪದಲ್ಲಿ ವ್ಯಕ್ತಪಡಿಸಲಾಗುವುದು.

(ನೋಡಿ- ಬೀನೆ,-ಆಲ್ಫ್ರೆಡ್)

ಬುದ್ಧಿಶಕ್ತಿ ಭೌತ ಮಾಪನೆಗೆ ನಿಲುಕದ ಅಂಶ. ಇದನ್ನು ಅಳೆಯುವುದು ಕಠಿಣ ಕಾರ್ಯ. ಸ್ಥೂಲವಾಗಿ ಬುದ್ಧಿ ಇಲ್ಲದವ, ಸುಮಾರು ಬುದ್ಧಿವಂತ, ಅತಿಬುದ್ಧಿವಂತ ಎಂದು ಗುರುತಿಸುವುದು ಹಿಂದಿನಿಂದಲೂ ಬಳಕೆಯಲ್ಲಿದ್ದರೂ, ಒಬ್ಬೊಬ್ಬರ ಬುದ್ಧಿಶಕ್ತಿಯನ್ನು ಈ ಒಂದೊಂದು ಪ್ರಮಾಣದ್ದೆಂದು ನಿಷ್ಕರ್ಷಿಸುವುದು ಬೀನೆಯ ಅನಂತರವೇ ಸಾಧ್ಯವಾಗಿರುವುದು. ಈತ ಬುದ್ಧಿಶಕ್ತಿಯ ವಯೋಮಾನದ ಅಳತೆಗೋಲನ್ನು ಸಿದ್ಧಪಡಿಸಿದ್ದು ಜ್ಞಾನ ಪ್ರಪಂಚದಲ್ಲಿ ನಡೆದಿರುವ ಪ್ರಧಾನ ಪ್ರಗತಿ. ಇದಕ್ಕಾಗಿ ಈತ ರಚಿಸಿದ ಒಂದೊಂದು ಪ್ರಶ್ನಾವಳಿಯೂ ಒಂದೊಂದು ವಯಸ್ಸಿನ ಬಾಲಕನಿಗೆಂದು ನಿರ್ಮಿತವಾಗಿದೆ. ಎಂದೇ ಒಬ್ಬ ಬಾಲಕನನ್ನು ಪರೀಕ್ಷಿಸಿ ಅವನ ಬುದ್ಧಿಶಕ್ತಿ ಸಾಧಾರಣ ಬಾಲಕನದಕ್ಕಿಂತ ಎಷ್ಟು ಹೆಚ್ಚು ಅಥವಾ ಕಡಿಮೆ ಎಂಬುದನ್ನು ನಿರ್ಧರಿಸಬಹುದು. ಉದಾಹರಣೆಗೆ 10 ವರ್ಷದ ಒಬ್ಬ ಬಾಲಕನ್ನು ಪರೀಕ್ಷಿಸಿದೆವೆಂದು ಭಾವಿಸೋಣ. ಅವನ ಮನಶ್ಯಕ್ತಿ 7.5 ವರ್ಷವೆಂದು ದೃಢಪಟ್ಟರೆ ಆತ ಸಾಧಾರಣ ಬಾಲಕನಿಗಿಂತ ಕಡಿಮೆ ಶಕ್ತಿಯುಳ್ಳವ. ಆಗ ಅವನ ಕಾಲಕ್ರಮದ ವಯಸ್ಸಿಗೂ ಮನಶ್ಯಕ್ತಿಯ ವಯಸ್ಸಿಗೂ ಇರುವ ಪ್ರಮಾಣವನ್ನು ಕಂಡುಹಿಡಿದು ಅದನ್ನು 100 ರಿಂದ ಗುಣಿಸಿದರೆ ಬರುವ ಸಂಖ್ಯೆಯನ್ನು ಆ ಬಾಲಕನ ಬುದ್ಧಿಶಕ್ತಿಯ ಸಾಮಥ್ರ್ಯಾಂಕ ಅಥವಾ Iಕಿ (ಇಂಟೆಲಿಜೆನ್ಸ್ ಕೋಷೆಂಟ್) ಎಂದು ಕರೆಯುವುದು ವಾಡಿಕೆ.

	ಮನಶ್ಯಕ್ತಿಯ ವಯಸ್ಸು (ಮೆಂಟಲ್ ಏಜ್, MA) = 7.5
	ಕಾಲಮಾನ ಪ್ರಕಾರ ವಯಸ್ಸು (ಕರೆಂಟ್ ಏಜ್ CA) = 10
 
       ಇವುಗಳ ನಿಷ್ಪತಿ = MA / CA=  7.5 /10
       ಆದ್ದರಿಂದ ಆತನ  IQ =  ( MA / CA) ×100
ಹೀಗೆಯೇ CA 10 ಆಗಿದ್ದಾಗ MA 12ಆಗಿದ್ದರೆ ಆ ಬಾಲಕನ IQ 120. ಈತ ತನ್ನ ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಪ್ರದರ್ಶಿಸುತ್ತಾನೆಂದು ಇದರ ಅರ್ಥ.

ಬುದ್ಧಿಶಕ್ತಿಯ ವೈಯಕ್ತಿಕ ಪ್ರಶ್ನಾವಳಿಗಳು: ಆಲ್ಫ್ರೆಡ್ ಬೀನೆ ರೂಪಿಸಿದ ಬುದ್ಧಿಶಕ್ತಿ ಮಾಪಕ ಪ್ರಶ್ನಾವಳಿಗಳು ವೈಯಕ್ತಿಕವಾಗಿ ಪ್ರಯೋಗಿಸತಕ್ಕವು. ಆ ಪ್ರಶ್ನಾವಳಿ ಬುದ್ಧಿಶಕ್ತಿಯ ವಿವಿಧ ಮುಖಗಳನ್ನು ಪರೀಕ್ಷಿಸುವಂತೆ ವಿವಿಧ ಕಾರ್ಯಗಳನ್ನು ಮಾಡುವ ಅಗತ್ಯವನ್ನೂ ಒಳಗೊಂಡಿದ್ದುವು. ಮೂಗನ್ನು ತೋರಿಸು, ಕಣ್ಣನ್ನು ತೋರಿಸು, ಬಾಯನ್ನು ತೋರಿಸು, ಪದಾರ್ಥವೊಂದರ ಚಿತ್ರ ಬರೆ ಇತ್ಯಾದಿ ಪ್ರಶ್ನೆಗಳು ಅದರಲ್ಲಿ ಸೇರಿದ್ದುವು. ಅವುಗಳಲ್ಲಿ ಶಾಲೆಯ ಅಧ್ಯಯನಗಳಿಗೆ ಸಂಬಂಧಿಸಿದ ಅಂಶಗಳು ಸೇರಿರಲಿಲ್ಲ. ಮೇಲಿನ ಕಾರ್ಯಪ್ರದ ಪ್ರಶ್ನಾವಳಿಗಳನ್ನು ಹೆಚ್ಚು ಹೆಚ್ಚು ಸಂಕೀರ್ಣಗೊಳಿಸಿ 3 ರಿಂದ 13 ವರ್ಷ ವಯಸ್ಸಿನ ಅವಧಿಯ ಮಕ್ಕಳನ್ನು ಪರೀಕ್ಷಿಸಿ ಅವರ ಬುದ್ಧಿಶಕ್ತಿಯ ಮಟ್ಟ ನಿಷ್ಕರ್ಷಿಸಲು ಪ್ರಶ್ನಾವಳಿಗಳನ್ನು ಸಿದ್ಧ ಪಡಿಸಿದ.

	ಲಂಡನ್ ಪರಿಷ್ಕøತ ಪ್ರಶ್ನಾವಳಿ: ಲಂಡನ್ನಿನ ಸಿರಿಲ್ ಬರ್ಟ್ ಎಂಬ ಮನಶ್ಯಾಸ್ತ್ರಜ್ಞ ಬೀನೆಯ ಪ್ರಶ್ನಾವಳಿಗಳನ್ನು ಪರಿಷ್ಕರಿಸಿ, ಇಂಗ್ಲಿಷ್ ಮಕ್ಕಳ ಬುದ್ಧಿ ಅಳೆಯಲು ಅಲ್ಲಿಯ ಸನ್ನಿವೇಶಗಳಿಗೆ ತಕ್ಕಂತೆ ಪರಿಷ್ಕರಿಸಿ ಪ್ರಕಟಿಸಿದ. ಇದೇ ಲಂಡನ್ ಪರಿಷ್ಕøತ ಪ್ರಶ್ನಾವಳಿ. ಇದು 16 ವರ್ಷದವರೆಗಿನ ಬಾಲಕ ಬಾಲಕಿಯರ ಬುದ್ಧಿಶಕ್ತಿ ಅಳೆಯಲು ಅನುಕೂಲಿಸುವಂತೆ ರೂಪುಗೊಂಡಿದೆ.

	ಸ್ಟಾನ್ ಫರ್ಡ್-ಬೀನೆ ಪ್ರಶ್ನಾವಳಿ: 1916ರಲ್ಲಿ ಅಮೆರಿಕದ ಸ್ಟಾನ್ ಫರ್ಡ್ ವಿಶ್ವವಿದ್ಯಾಲಯದ ಲೂಯಿ ಟರ್ಮನ್ ಎಂಬಾತ ಬೀನೆಯ ಪ್ರಶ್ನಾವಳಿಗಳನ್ನು ಆಧಾರ ಮಾಡಿಕೊಂಡು ನೂತನ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿದ. ಇದಕ್ಕೆ ಸ್ಟಾನ್ ಫರ್ಡ್-ಬೀನೆ ಪರಿಷ್ಕøತ ಪ್ರಶ್ನಾವಳಿ ಎಂದು ಹೆಸರು. 2 ರಿಂದ 16 ವರ್ಷದವರೆಗಿನ ಮಕ್ಕಳ ಬುದ್ಥಿಶಕ್ತಿ ಅಳೆಯಲು ಅನುಕೂಲಿಸುವಂತೆ ಇವು ರೂಪುಗೊಂಡಿವೆ. ಪ್ರಶ್ನೆಗಳು ವಸ್ತು, ವಿಷಯ, ಚಿತ್ರ, ದೇಹಭಾಗ ಇತ್ಯಾದಿ ಅಂಶಗಳನ್ನು ಕೇಳುತ್ತದೆ. ಪದ ಸಂಪತ್ತು ಪದಗಳ ಸರಿಯಾದ ಬಳಕೆ, ಜ್ಞಾಪಕಶಕ್ತಿ ಇವನ್ನು ಪರೀಕ್ಷಿಸುತ್ತವೆ. ಮೇಲ್ವಯಸ್ಸಿನ ಮಕ್ಕಳಿಗೆ ಆಲೋಚನೆ, ಕಾರ್ಯ ಕಾರಣಗಳ ಜ್ಞಾನ, ಪದಗಳ ಅರ್ಥ, ಸಂಖ್ಯಾಪರಿಚಯ ಇತ್ಯಾದಿಗಳನ್ನು ಪರೀಕ್ಷಿಸುವಂತೆ ರೂಪುಗೊಂಡಿವೆ.

	ವೆಸ್ಲರ್ ಬೆಲುವ್ಯೂ ಪ್ರಶ್ನಾವಳಿ : ಇದು ಮಕ್ಕಳ ಬುದ್ಧಿಶಕ್ತಿಯನ್ನು ವೈಯಕ್ತಿಕವಾಗಿ ಅಳೆಯಲು ರೂಪುಗೊಂಡ ಸಾಧನ, ಇದನ್ನು ಸಿದ್ಧಪಡಿಸಿದಾತ ನ್ಯೂಯಾರ್ಕಿನ ಬೆಲುವ್ಯೂ ಚಿಕಿತ್ಸಾಲಯದ ಡೇವಿಡ್. ಇದರಲ್ಲಿ ಟರ್ಮನ್ನರ ಪ್ರಶ್ನಾವಳಿಯಲ್ಲಿರುವಂತೆ ಅನೇಕ ಉಪಪ್ರಶ್ನೆಗಳಿವೆ. ಸಾಮಾನ್ಯ ಜ್ಞಾನ, ಅರ್ಥಗ್ರಹಣ, ಗಣಿತ, ಅಂಕೆ ಮತ್ತು ಪದಗಳ ನೆನಪು ಈ ಅಂಶಗಳ ಮೇಲೆ ಪ್ರಶ್ನೆಗಳು ರೂಪುಗೊಂಡಿದೆ. ಹಲಕೆಲವು ಕಾರ್ಯಪ್ರದ ಪ್ರಶ್ನೆಗಳೂ ಇವೆ. ಇವೆರಡು ರೀತಿಯ ಪ್ರಶ್ನಾವಳಿಗಳಿಗೂ ಪ್ರತ್ಯೇಕವಾಗಿ ಬೆಲೆ ಕಟ್ಟಿ ಒಂದೊಂದರ ಮೂಲಕವೂ ವ್ಯಕ್ತಿಯ ಬುದ್ಧಿಶಕ್ತಿಯನ್ನು ಪ್ರತ್ಯೇಕವಾಗಿ ಅಳೆಯಬಹುದು. ಭಾಷಾಶಕ್ತಿ ಅಷ್ಟಾಗಿ ಇಲ್ಲದವರಿಗೂ ಅನ್ಯ ಭಾಷೆಯವರಿಗೂ ಎರಡನೆಯ ಗುಂಪಿನ ಪ್ರಶ್ನಾವಳಿಗಳು ತಕ್ಕವಾಗಿವೆ. ಮಕ್ಕಳ ಬುದ್ಧಿಶಕ್ತಿಯಂತೆ ವಯಸ್ಕರ ಬುದ್ಧಿಶಕ್ತಿಯನ್ನು ಅಳೆಯುವ ಇನ್ನೊಂದು ರೀತಿಯ ಪ್ರಶ್ನಾವಳಿಗಳೂ ಇದರಲ್ಲಿವೆ.

	ಸಾಮೂಹಿಕ ಬುದ್ಧಿಶಕ್ತಿಯ ಪರೀಕ್ಷೆಗಳು: ಇದುವರೆಗೂ ವಿವರಿಸಿದ ಬುದ್ಧಿ ಶಕ್ತಿಯ ಅಳತೆಯ ಸಾಧನೆ ವೈಯಕ್ತಿಕವಾಗಿ ಒಬ್ಬೊಬ್ಬರನ್ನಾಗಿ ಪರೀಕ್ಷಿಸಲು ನೆರವಾಗತಕ್ಕವು. ಇದರಿಂದ ಅನೇಕರನ್ನು ಪರೀಕ್ಷಿಸಲು ಅಧಿಕ ಕಾಲಹಿಡಿಯುತ್ತದೆ. ಸಾಮೂಹಿಕವಾಗಿ ಉಪಯೋಗಕ್ಕೆ ಬರತಕ್ಕ ಕ್ರಮವೊಂದನ್ನು ರೂಪಿಸಲು ಅಮೆರಿಕದಲ್ಲಿ 1919ರಿಂದ ಯತ್ನ ನಡೆದು 1915ರ ಸುಮಾರಿಗೆ ಪರೀಕ್ಷೆಗಳು ಪಕ್ವಾವಸ್ಥೆಗೆ ಬಂದವು. ಆದರೆ ಅವು ಪ್ರಾಧಾನ್ಯಗಳಿಸದೆ ಪ್ರಯೋಗಾವಸ್ಥೆಯಲ್ಲೇ ಉಳಿದಿದ್ದುವು. 1917ರಲ್ಲಿ ಅಮೆರಿಕ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಲು ನಿರ್ಧರಿಸಿದಾಗ ತನ್ನ ಸೇನೆಗೆ 20 ಲಕ್ಷ ಮಂದಿಯನ್ನು ಹೊಸದಾಗಿ ಸೇರಿಸಿಕೊಳ್ಳಲು ಯತ್ನ ಮಾಡಿತು. ಹಾಗೆ ಮಾಡುವಾಗ ವ್ಯಕ್ತಿಗಳ ಬುದ್ಧಿಶಕ್ತಿ ಅನುಸರಿಸಿ ಅವರಿಗೆ ಉಚಿತ ಕೆಲಸ ಕೊಡಲು ಹವಣಿಸಿ ಈ ಯೋಜನೆಗೆ ರೂಪಗೊಡಲು ಅಲ್ಲಿಯ ಮನಶ್ಯಾಸ್ತ್ರಜ್ಞನ್ನು ಕೇಳಿಕೊಂಡಿತು. ಆಗ ಇವರು ಎರಡು ರೀತಿಯ ಪ್ರಶ್ನಾವಳಿಗಳನ್ನು ತಯಾರಿಸಿದರು. ಭಾಷೆ ಬಲ್ಲವರಿಗೆ ಅನುಕೂಲಿಸತಕ್ಕದ್ದು ಒಂದು ರೀತಿಯವು; ಭಾಷೆಯಲ್ಲಿ ತಕ್ಕಷ್ಟು ಜ್ಞಾನವಿಲ್ಲದ ಅಥವಾ ಬೇರೆ ಭಾಷೆ ಆಡತಕ್ಕ ಇತರರ ಬುದ್ಧಿಶಕ್ತಿ ಅಳೆಯಲು ಅನುಕೂಲಿಸತಕ್ಕ ಪ್ರಶ್ನಾವಳಿ ಇನ್ನೊಂದು ರೀತಿಯವು. ಇವನ್ನು ಸಾಮೂಹಿಕವಾಗಿ ಕೊಟ್ಟು, ಪರೀಕ್ಷಿಸಿ ಲಕ್ಷಾಂತರ ಜನರ ಬುದ್ಧಿಶಕ್ತಿಯನ್ನು ನಿರ್ಧರಿಸಿದರು. ಇವರ ನಿರ್ಧಾರದ ಆಧಾರದ ಮೇಲೆ ಆ ವ್ಯಕ್ತಿಗಳಿಗೆ ಉಚಿತ ಸ್ಥಾನಮಾನ ಕೊಡಲಾಯಿತು. ಯುದ್ಧಾನಂತರ ಮನಶ್ಯಾಸ್ತ್ರಜ್ಞರು ನಿರ್ಧರಿಸಿದ್ದ ಬುದ್ಧಿಶಕ್ತಿಯನ್ನೂ ಆ ವ್ಯಕ್ತಿಗಳು ಯುದ್ಧದಲ್ಲಿ ತೋರಿಸಿದ ಕಾರ್ಯ ದಕ್ಷತೆಯನ್ನೂ ಹೋಲಿಸಿ ನೋಡಲಾಯಿತು. ಮನಶ್ಯಾಸ್ತ್ರಜ್ಞರು ನಡೆಸಿ ನಿರ್ಧರಿಸಿದ ಬುದ್ಧಿಶಕ್ತಿಯ ಅಳತೆ ಸರಿಯೆಂದು ದೃಢಪಟ್ಟಿತು. ಅಂದಿನಿಂದ ಈ ಸಾಮಾಜಿಕ ಪರೀಕ್ಷೆಗಳು ಅಮೆರಿಕದ ಜನರಲ್ಲಿ ಹೆಚ್ಚಿನ ಆಸಕ್ತಿ ನಂಬಿಕೆ ಹುಟ್ಟಿಸಿ ಕ್ರಮ ಕ್ರಮವಾಗಿ ಅಲ್ಲಿಯ ಸಾರ್ವಜನಿಕ ಶಿಕ್ಷಣ ರಂಗದಲ್ಲೂ ಪ್ರಚಾರಕ್ಕೆ ಬಂದಿವೆ.

	ಭಾರತದಲ್ಲಿ ಬುದ್ಧಿಶಕ್ತಿಯ ಪ್ರಶ್ನಾವಳಿ ರಚನೆ ಮತ್ತು ಬಳಕೆ: ಭಾರತದಲ್ಲಿ ಬುದ್ಧಿಶಕ್ತಿಯ ಅಳತೆಯ ವ್ಯವಸ್ಥೆ ಅಷ್ಟು ಮುಂದುವರಿದಿಲ್ಲ. ಇದಕ್ಕೆ ಅನೇಕ ತೊಡಕುಗಳಿವೆ. ಇಲ್ಲಿ ಮಕ್ಕಳ ಮತ್ತು ದೊಡ್ಡವರ ನಿಖರವಾದ ಹುಟ್ಟಿದ ತಾರೀಕು ಸಿಕ್ಕುವುದಿಲ್ಲ. ಉಪಾಧ್ಯಾಯರು ಶಾಲೆಗೆ ಸೇರಿಸಿಕೊಳ್ಳುವಾಗ ಆ ಕಡೆ ತಕ್ಕಷ್ಟು ಗಮನ ಕೊಡುತ್ತಿಲ್ಲ. ರಾಷ್ಟ್ರವೂ ಈ ಬಗ್ಗೆ ವಿಶೇಷ ಕಾಳಜಿವಹಿಸಿದಂತಿಲ್ಲ. ಅಲ್ಲದೆ ಈ ವಿಧಾನ ತೀರ ಹೊಸದಾದ್ದರಿಂದ ಈ ಪ್ರಶ್ನಾವಳಿಗಳ ಪ್ರಚಾರದಲ್ಲಿ ಜನತೆಗೂ ಆಸಕ್ತಿಯಿಲ್ಲ. ಅನೇಕ ಉಪಾಧ್ಯಾಯರಿಗೆ ಅವನ್ನು ಬಳಸುವಷ್ಟು ಅನುಭವವಿರುವುದಿಲ್ಲ. ಆದರೂ ಭಾರತದಲ್ಲಿ ಬುದ್ಧಿಶಕ್ತಿಯ ಪರೀಕ್ಷೆಗೆ ಅನುಕೂಲಿಸುವ ಪ್ರಶ್ನಾವಳಿ ಸುಮಾರು ಐವತ್ತು ವರ್ಷಗಳಿಂದ ರಚನೆಯಾಗುತ್ತಿವೆ. ಅವುಗಳ ಪೈಕಿ ಮುಖ್ಯವಾದವನ್ನು ಇಲ್ಲಿ ಸೂಚಿಸಿದೆ.

	ರೈಸರ ಬುದ್ಧಿಶಕ್ತಿಯ ಪ್ರಶ್ನಾವಳಿಗಳು: ಬೀನೆಸೈಮನ್ ಪ್ರಶ್ನಾವಳಿಗಳನ್ನು ಆಗಲೇ ಟರ್ಮನ್, ಬರ್ಟ್ ಮುಂತಾದವರು ತಮ್ಮ ದೇಶದ ಸನ್ನಿವೇಶಗಳಿಗೆ ಒಪ್ಪುವಂತೆ ಪರಿಷ್ಕರಿಸಿದರು. ಹರ್ಬಟ್ ರೈಸ್ ಅವನ್ನು ಮಾರ್ಪಡಿಸಿ ಪಾಯಿಂಟ್ ಸ್ಕೇಲಿಗೆ ವ್ಯವಸ್ಥೆಗೊಳಿಸಿ ಪಂಜಾಬಿನಲ್ಲಿ ಪ್ರಚಾರಕ್ಕೆ ತಂದ. ಈ ಪ್ರಶ್ನಾವಳಿಯಲ್ಲಿ ಭಾಷಾರೀತಿಯ ಪ್ರಶ್ನೆಗಳ ಜೊತೆಗೆ ಪಿಂಟ್ಕರ್ ಮತ್ತು ಪೀಟರ್‍ಸನ್ ಎಂಬವರ ಕಾರ್ಯಪ್ರದ ಪ್ರಶ್ನಾವಳಿಗಳನ್ನೂ ಸೇರಿಸಲಾಗಿತ್ತು. ಪಂಜಾಬಿನ ವಿವಿಧ ಪ್ರದೇಶಗಳ ಶಾಲೆಗಳಲ್ಲಿ ರೈಸ್ 5 ರಿಂದ 16 ವರ್ಷಗಳ ನಡುವಿನ 1070 ಮಂದಿ ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ ಈ ಪ್ರಶ್ನಾವಳಿಯನ್ನು ಶಿಷ್ಟೀಕರಿಸಿದ್ದಾನೆ. ಇದರಲ್ಲಿ 26 ಭಾಷಾರೀತಿಯ ಪ್ರಶ್ನೆಗಳಿಗೂ ಕಾರ್ಯಪ್ರದ ಪ್ರಶ್ನೆಗಳೂ ಸೇರಿವೆ. ಜೊತೆಗೆ 7 ಹೆಚ್ಚಿನ ಪ್ರಶ್ನೆಗಳೂ ಉಂಟು. ಇವು ಇನ್ನೂ ಮೇಲ್ಮಟ್ಟದ ಬುದ್ಧಿಶಕ್ತಿಯ ಬಾಲಕರನ್ನು ಪರೀಕ್ಷಿಸಲು ರಚಿಸಿರುವಂಥವು. ಮೊದಲ ಪ್ರಶ್ನೆಗಳು ಸುಲಭವಾಗಿದ್ದ ಮಕ್ಕಳ ಆಸಕ್ತಿಯನ್ನು ದೊರಕಿಸಿಕೊಳ್ಳಲು ಅನುಕೂಲವಾಗಿವೆ. ಕಾರ್ಯಪ್ರದ ಪ್ರಶ್ನೆಗಳು (9) ಮಕ್ಕಳ ಜ್ಞಾಪಕಶಕ್ತಿ ಮತ್ತು ಚಟುವಟಿಕೆಗಳನ್ನು ಪರೀಕ್ಷಿಸುವಂತಿವೆ. ಮೇಲಿನ ಪ್ರಶ್ನಾವಳಿಗಳು ಉರ್ದು ಮತ್ತು ಪಂಜಾಬಿ ಭಾಷೆಗಳೆರಡರಲ್ಲೂ ಪ್ರಚಾರಕ್ಕೆ ಬಂದಿವೆ. ರೈಸರ ಎರಡು ಪ್ರಶ್ನಾವಳಿಗಳೂ ಪಾಯಿಂಟ್ ಸ್ಕೇಲಿನಲ್ಲಿವೆ. ಅವು ವಯಸ್ಸಿನ ಆಧಾರದ ಮೇಲೆ ರೂಪುಗೊಂಡಿಲ್ಲ. ಪ್ರಶ್ನೆಗಳನ್ನೆಲ್ಲ ಒಟ್ಟಿಗೆ ಎಲ್ಲರೂ ಉತ್ತರಿಸಬೇಕು. ಬಂದ ಅಂಕಗಳನ್ನು ಆಯಾ ಬಾಲಕನ ವಯಸ್ಸಿನ ಸರಾಸರಿ ಅಂಕೆಯಿಂದ ಭಾಗಿಸಿ ಆತನ ಬುದ್ಧಿಶಕ್ತಿಯ ಮಟ್ಟ ನಿಷ್ಕರ್ಷಿಸಲಾಗುವುದು. ಇದು Iಕಿಗೆ ಸಮವಾಗಿರಬೇಕಾಗುವುದು.

	ವಿ.ವಿ.ಕಾಮತರ ಪರಿಷ್ಕøತ ಪ್ರಶ್ನಾವಳಿಗಳು: ಕಾಮತರು ಬೀನೆ ಸೈಮನ್ನರ ಮತ್ತು ಸ್ಟಾನ್‍ಫರ್ಡ್‍ರ ಪರಿಷ್ಕøತ ಪ್ರಶ್ನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲಿಯ ಸನ್ನಿವೇಶಗಳಿಗೆ ಒಪ್ಪುವಂತೆ ಕನ್ನಡ ಮತ್ತು ಮರಾಠೀ ಭಾಷೆಗಳಲ್ಲಿ ಬುದ್ಧಿಶಕ್ತಿಯ ಪ್ರಶ್ನಾವಳಿಗಳನ್ನು ರೂಪಿಸಿರುವರು. ಮೇಲಿನ ಇಂಗ್ಲಿಷ್ ಭಾಷೆಯ ಪ್ರಶ್ನಾವಳಿಗಳನ್ನು ಭಾರತೀಯ ಭಾಷೆಗಳಿಗೆ ಪರಿವರ್ತಿಸಿ ಅಗತ್ಯ ಮಾರ್ಪಾಡು ಮಾಡಿದ್ದಾರೆ. ನೂತನ ಪ್ರಶ್ನಾವಳಿಗಳನ್ನು ರೂಪಿಸಿ ಶಿಷ್ಟೀಕರಿಸುವುದಕ್ಕಿಂತ ಇದು ಸುಲಭ. ಕಾಮತರ ಪ್ರಶ್ನಾವಳಿಗಳು ಭಾಷಾ ದೃಷ್ಟಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾರ್ವತ್ರಿಕವಾಗಿ ಪ್ರಚಾರಕ್ಕೆ ಬರಲು ಅರ್ಹವಾಗಿಲ್ಲ. ಅವರು ಕೇವಲ ಒಂದು ಪ್ರದೇಶದ ಭಾಷೆಯನ್ನೇ ಪೂರ್ಣವಾಗಿ ಬಳಸಿದ್ದಾರೆ. ಕನ್ನಡ ಪ್ರಶ್ನಾವಳಿ ಇನ್ನೂ ಉತ್ತಮಗೊಳ್ಳಬೇಕು. ಆದರೂ ಮೂಲ ಪ್ರಶ್ನಾವಳಿಗಳ ಪರಿಷ್ಕರಣ ಮತ್ತು ಮಾರ್ಪಾಡು ದಕ್ಷತೆಯಿಂದ ನಡೆದಿವೆ.

	ಇತರ ಯತ್ನಗಳು: ಮೇಲಿನ ಪ್ರಶ್ನಾವಳಿಗಳ ಜೊತೆಗೆ ಇತರರು ಪರಿಷ್ಕøತ ಪ್ರಶ್ನಾವಳಿಗಳನ್ನೋ ಹೊಸ ಪ್ರಶ್ನಾವಳಿಗಳನ್ನೋ ರೂಪಿಸಿದ್ದಾರೆ. ಮೈಸೂರಿನ ಎಂ.ವಿ.ಗೋಪಾಲಸ್ವಾಮಿಯವರು ಕನ್ನಡದಲ್ಲಿ ಬೀನೆಯವರ ಮೂಲ ಪ್ರಶ್ನಾವಳಿಗಳನ್ನು ಪರಿಷ್ಕರಿಸಿ ಮಾರ್ಪಡಿಸಿ ಪ್ರಕಟಿಸಿದ್ದಾರೆ. ಎಚ್.ಪಿ.ಮೈತ್ರಿಯವರು ಬಂಗಾಳಿ ಭಾಷೆಯಲ್ಲಿ ಬೀನೆಯವರ ಪ್ರಶ್ನಾವಳಿಯ ಪರಿಷ್ಕøತ ಮುದ್ರಣವೊಂದನ್ನು ಪ್ರಕಟಿಸಿರುವರು.					 				
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ